ವೆಂಕಟಸುಬ್ಬಯ್ಯ
	1885-1965. ಕರ್ನಾಟಕದ ಪ್ರಸಿದ್ಧ ಪೀಟೀಲು ವಿದ್ವಾಂಸರು. 1885 ಅಕ್ಟೋಬರ್ 5ರಂದು ತಿರುಮಕೂಡಲು ನರಸೀಪುರ ದಲ್ಲಿ ಜನಿಸಿದರು. ತಂದೆ ಸಂಪಿಗೆರಾಯರು, ತುಮಕೂರು ಜಿಲ್ಲೆಯ ಕಡಬ ಗ್ರಾಮದಲ್ಲಿ ಶ್ಯಾನುಭೋಗರಾಗಿದ್ದವರು. ತಾಯಿ ಗುಂಡಮ್ಮ. ವೆಂಕಟಸುಬ್ಬಯ್ಯನವರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ವಿಶೇಷ ಆಸಕ್ತಿ ಇತ್ತು. ಇವರ ಸಂಗೀತಾಸಕ್ತಿಯನ್ನು ಗಮನಿಸಿದ ತಿರುಮಕೂಡಲು ನರಸೀಪುರದ ಪಿಟೀಲು ವಿದ್ವಾಂಸರಾಗಿದ್ದ ಶಾಮಣ್ಣನವರು ಇವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಸತತ ಅಭ್ಯಾಸ ಹಾಗೂ ಸಜ್ಜನಿಕೆಗ ಳಿಂದಾಗಿ ಗುರುಕೃಪೆಗೆ ಪಾತ್ರರಾದ ಇವರು ಮುಂದೆ ಲಾಲ್‍ಗುಡಿ ರಾಮಯ್ಯರ್ ಹಾಗೂ ತಿರುಕ್ಕೋಡಿಕಾವಲ್ ಕೃಷ್ಣ ಅಯ್ಯರ್ ಎಂಬ ವಿದ್ವಾಂಸರುಗಳಿಂದ ಪ್ರಭಾವಿತರಾಗಿ ಅಪ್ರತಿಮ ಪಿಟೀಲು ವಾದಕರೆನಿಸಿ ದರು. ಗುರುಕುಲವಾಸದ ಬಳಿಕ 1935-36ರಲ್ಲಿ ಇವರ ಚಿಕ್ಕಪ್ಪ ವೆಂಕಟ ರಾಯರು ಇವರನ್ನು ಮೈಸೂರಿಗೆ ಕರೆಯಿಸಿಕೊಂಡರು.

	ಇವರು ತಿರುಮಕೂಡಲು ನರಸೀಪುರದಲ್ಲಿದ್ದಾಗ ಸಂಗೀತಾರಾಧನೆ ಯೊಂದಿಗೆ ಶ್ಯಾನುಭೋಗ ವೃತ್ತಿಯನ್ನೂ ಮಾಡಿಕೊಂಡಿದ್ದರು. ರಾತ್ರಿ ಹಗಲುಗಳೆನ್ನದೆ ಇವರ ಪಿಟೀಲುವಾದನ ಸಾಧನೆ ನಡೆಯುತ್ತಿತ್ತು. ಕೆಲವೊಮ್ಮೆ ಇವರ ಸಂಗೀತಸುಧೆಯನ್ನು ಸವಿಯಬೇಕೆಂಬ ಉದ್ದೇಶದಿಂದ ಕಲಾಪ್ರಿಯರು ಇವರು ಮಲಗುವ ಕೋಣೆಯಲ್ಲೇ ತಾವೂ ಮಲಗಿ ಸಂಗೀತವನ್ನು ಆಲಿಸುತ್ತಿದ್ದರು.    

	ಇವರದು ಸಂಕೋಚ ಮತ್ತು ಅಧೈರ್ಯದ ಸ್ವಭಾವ. ಹೆಚ್ಚಾಗಿ ಜನರೊಂದಿಗೆ ಬೆರೆಯುತ್ತಿರಲಿಲ್ಲ. ಆದರೆ ಇವರಿಗಿದ್ದ ಸಂಗೀತವಿದ್ಯೆ ಯಿಂದಾಗಿ ಹಿರಿಯ ವಿದ್ವಾಂಸರೆಲ್ಲ ಇವರಲ್ಲಿ ಗೌರವವನ್ನಿಟ್ಟಿದ್ದರು. ಒಮ್ಮೆ ಮೈಸೂರು ಆಸ್ಥಾನದ ವಿದ್ವಾಂಸರಾಗುವಂತೆ ಮಹಾರಾಜರಿಂದ ಆಹ್ವಾನವೂ ಬಂದಿತ್ತು. ಆದರೆ ಇವರು ಅದನ್ನು ವಿನಯಪೂರ್ವಕ ವಾಗಿಯೇ ನಿರಾಕರಿಸಿದರು. ಅಂತೆಯೇ ಸ್ವಇಚ್ಛೆಯಿಂದ ನಾಡಿನ ವಿವಿಧೆಡೆ ಗಳಲ್ಲಿ ಕಾರ್ಯಕ್ರಮ ನೀಡದಿದ್ದರೂ ಗೆಳೆಯರ ಒತ್ತಾಯಕ್ಕೆ ಮಣಿದು ತಿರುಚ್ಚಿರಾಪಳ್ಳಿ, ಮದರಾಸು, ಮೈಸೂರು ಮುಂತಾದ ಸ್ಥಳಗಳಲ್ಲಿ ಸಂಗೀತಕಚೇರಿಗಳನ್ನು ನೀಡಿದ್ದರು. ಇವರಿಗೆ 1963,1964 ಮತ್ತು 1965ರಲ್ಲಿ ಸರ್ಕಾರದ ಪುರಸ್ಕಾರ ಲಭಿಸಿತ್ತು.

	ಮೈಸೂರಿಗೆ ಬಂದು ನೆಲಸಿದ ಬಳಿಕ ಮನೆಯಲ್ಲಿ ರಾಮೋತ್ಸವಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಾಯನ, ವಾದನಕಚೇರಿಗಳನ್ನು ಏರ್ಪಡಿಸುತ್ತಿದ್ದರು. ಇನ್ನಿತರ ದಿನಗಳಲ್ಲಿ ವಿದ್ವಾನ್ ಚನ್ನಕೇಶವಯ್ಯ, ಸೋಸಲೆ ರಾಮದಾಸ ಮೊದಲಾದ ವಿದ್ವಾಂಸರೊಂದಿಗೆ ಸಂಗೀತಾಭ್ಯಾಸ ನಡೆಸುತ್ತಿದ್ದರು. ಇವರು ಸಹಜ ಸಂಗೀತಕಲಾವಿದರಾಗಿದ್ದರು. ಇವರ ಸಂಗೀತದಲ್ಲಿ ರಾಗಭಾವಲಯವೈವಿಧ್ಯಗಳು ಜೊತೆಗೂಡಿರುತ್ತಿದ್ದುವು. ಸ್ವರಕಲ್ಪನೆಯಲ್ಲಿ, ಅತೀತ-ಅನಾಗತದ ಮಾದರಿಗಳು ಅನಾಯಾಸವಾಗಿ ಮೂಡಿ ಬರುತ್ತಿದ್ದುವು. ಹೀಗಾಗಿ ಅಂದಿನ ಹೆಸರಾಂತ ಕಲಾವಿದರಾಗಿದ್ದ ಟೈಗರ್ ವರದಾಚಾರ್ಯ, ಬೇಲೂರು ಕೇಶವದಾಸ, ಸೋಸಲೆ ರಾಮದಾಸ, ಮೈಸೂರು ವಾಸುದೇವಾಚಾರ್ಯ, ಪಿಟೀಲು ಟಿ. ಚೌಡಯ್ಯ, ರಂಗಾಚಾರ್ಯ, ನವರತ್ನ ರಾಮರಾಯ, ವೈಣಿಕ ಶಿಖಾಮಣಿ ವೆಂಕಟಗಿರಿಯಪ್ಪ, ವೈಣಿಕ ವಿದ್ವಾನ್ ಸುಬ್ಬಣ್ಣ, ಮೃದಂಗ ವಿದ್ವಾನ್ ಟಿ.ಎಂ. ಪುಟ್ಟಸ್ವಾಮಯ್ಯ, ಬಿ.ಕೆ. ಪದ್ಮನಾಭರಾಯ ಇವರೆಲ್ಲ ಇವರ ಪಿಟೀಲು ವಾದನಶೈಲಿಯನ್ನು ಬಲು ಮೆಚ್ಚಿಕೊಂಡಿದ್ದರು. ಟೈಗರ್ ವರದಾಚಾರ್ಯರಿಗಂತೂ ಕಚೇರಿಯಲ್ಲಿ ಇವರ ಪಕ್ಕವಾದ್ಯವಿದ್ದರೆ ಮನೋಧರ್ಮ ಉಕ್ಕಿ ಹರಿಯುತ್ತಿತ್ತಂತೆ. ಇವರು ತಮ್ಮ ಮಧುರ ವಾದನಶೈಲಿಯಿಂದ ದೇಶ-ವಿದೇಶದವರನ್ನೂ ಆಕರ್ಷಿಸುತ್ತಿದ್ದರು. ಇವರಿಗೆ ಕೀರ್ತಿಕಾಮನೆ ಇರಲಿಲ್ಲ. ಸು. 80 ವರ್ಷಗಳ ಕಾಲ ಬಾಳಿಬದುಕಿದ ಇವರು ಮೈಸೂರಿನಲ್ಲಿದ್ದ ತಮ್ಮ ಕಿರಿಯ ಮಗಳು ಲಕ್ಷ್ಮಮ್ಮನ ಮನೆಯಲ್ಲಿ 1965 ಮಾರ್ಚಿ 21ರಂದು ನಿಧನರಾದರು. ಇವರ ಮಕ್ಕಳು, ಮೊಮ್ಮಕ್ಕಳು ವಂಶವಾಹಿಯಾಗಿ ಬಂದ ಸಂಗೀತವನ್ನು ಮುಂದುವರಿಸಿ ಕೊಂಡು ಬಂದಿದ್ದಾರೆ.			
	(ಟಿ.ಎನ್.ಪಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ